ನುಲಿಯ ಚಂದಯ್ಯ
ಸು. 1160. ಶಿವಶರಣ; ವಚನಕಾರ. ಬಸವಣ್ಣನವರ ಸಮಕಾಲೀನ. ಚಂಡೇಶ್ವರ ಲಿಂಗ ಎಂಬ ಅಂಕಿತದಲ್ಲಿ ವಚನಗಳನ್ನು ರಚಿಸಿದ್ದಾನೆ. ಬಿಜಾಪುರಕ್ಕೆ 18 ಮೈಲಿ ದೂರದಲ್ಲಿರುವ ಶಿವಣಗಿ ಈತ ಹುಟ್ಟಿದೂರೆಂದು ಹೇಳುತ್ತಾರೆ. ವೀರಶೈವ ಪುರಾಣ ಹಾಗೂ ಕಾವ್ಯಗಳಿಂದ ಈತನ ಜೀವನ ಚರಿತ್ರೆಯನ್ನು ಹೀಗೆ ಸಂಗ್ರಹಿಸಬಹುದು.

	ಈ ಭಕ್ತ ಹುಲ್ಲಿನಿಂದ ಹಗ್ಗವನ್ನು ಮಾಡಿ, ಮಾರಿ, ಜಂಗಮ ಸೇವೆಯನ್ನು ಆಚರಿಸುತ್ತಿದ್ದ. ಒಮ್ಮೆ ಅಡವಿಯಲ್ಲಿ ಹುಲ್ಲು ಕೊಯ್ಯುತ್ತಿರುವಾಗ ಈತನ ಇಷ್ಟಲಿಂಗ ಈತನನ್ನು ಪರೀಕ್ಷಿಸಬೇಕೆಂದು ಕುಚೋದ್ಯದಿಂದ ಕೆಳಕ್ಕೆ ಉರುಳಿತು. ಚಂದಯ್ಯ ಅದರ ಪಾಡಿಗೆ ಅದನ್ನು ಬಿಟ್ಟು ಕೆಲಸ ಮುಗಿಯುತ್ತಲೇ ಮನೆಗೆ ಹಿಂತಿರುಗಿದ. ಇಷ್ಟಲಿಂಗ ಮತ್ತೆ ಮತ್ತೆ ಬೇಡಿದರೂ ಅದನ್ನು ಧರಿಸಲಿಲ್ಲ. ಆಗ ಅದು ಚರಮೂರ್ತಿ ರೂಪತಳೆದು ಈತನನ್ನೇ ಹಿಂಬಾಲಿಸಲು, ತನ್ನ ಕಾಯಕ ಕೈಕೊಳ್ಳುವಂತಿದ್ದರೆ ಮಾತ್ರ ತನ್ನನ್ನು ಹಿಂಬಾಲಿಸಬಹುದೆಂದು ಅದಕ್ಕೆ ಆಜ್ಞೆ ಮಾಡಿದ. ಚಂದಯ್ಯನ ಆಜ್ಞೆಯಂತೆ ಚರಮೂರ್ತಿ ರೂಪದ ಲಿಂಗ ಹಗ್ಗವನ್ನು ಹೊಸೆದು ಬಸವಣ್ಣನಿಗೆ ಮಾರಿ ಸಾವಿರ ಹೊನ್ನನ್ನು ತಂದು ಕೊಡಲಾಗಿ ಚಂದಯ್ಯ ಅದನ್ನು ಸ್ವೀಕರಿಸದೆ ಹಗ್ಗದ ಬೆಲೆ ಒಂದು ಹಾಗೆ ಮಾತ್ರ ತರುವಂತೆ ಅಪ್ಪಣೆ ಮಾಡಿದ. ಇಷ್ಟಲಿಂಗವನ್ನು ಮತ್ತೆ ಧರಿಸುವಂತೆ ಮಡಿವಾಳ ಮಾಚಯ್ಯ ಬುದ್ಧಿವಾದ ಹೇಳಿದರೂ ಚಂದಯ್ಯ ಕೇಳಲಿಲ್ಲ. ಕಡೆಗೆ ಶಿವಾನುಭವ ಗೋಷ್ಠಿಯಲ್ಲಿ ಗುರು-ಲಿಂಗ-ಜಂಗಮ-ಈ ಮೂರೂ ವೀರಶೈವರಿಗೆ ಅಭಿನ್ನವೆಂದು ತೀರ್ಮಾನವಾದ ಮೇಲೆ ಮತ್ತೆ ಇಷ್ಟಲಿಂಗವನ್ನು ಧರಿಸಿದ.

	ಈತನ ಪ್ರಸ್ತಾಪ ಶೂನ್ಯಸಂಪಾದನೆ, ಬಸವ ಪುರಾಣ, ಶಿವತತ್ತ್ವ ಚಿಂತಾಮಣಿ, ಭೈರವೇಶ್ವರ ಕಾವ್ಯದ ಕಥಾಸೂತ್ರ ರತ್ನಾಕರ, ನುಲಿಯ ಚಂದಯ್ಯ ತ್ರಿವಿಧಿ-ಇವೇ ಮೊದಲಾದ ಗ್ರಂಥಗಳಲ್ಲಿ ಉಕ್ತವಾಗಿವೆ.

	ಈತನ ಕಾಯಕನಿಷ್ಠೆ ಸಾರುವ ಒಂದು ವಚನ ಹೀಗಿದೆ:

	ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿ
	ಲಿಂಗವಾದರೂ ಕಾಯಕದಿಂದಲೇ ಶಿಲೆಯ ಕುಲಹರಿವುದು
	ಜಂಗಮವಾದರೂ ಕಾಯಕದಿಂದಲೇ ವೇಷದ ಪಾಶ ಹರಿವುದು
	ಇದು ಚನ್ನಬಸವಣ್ಣ ಪ್ರಿಯ ಚಂದೇಶ್ವರ ಲಿಂಗದ ಅರಿವು

	ಕಲ್ಯಾಣ ಕ್ರಾಂತಿಯ ಬಳಿಕ, ಈ ಶರಣ ಉಳಿವೆ, ಎಣ್ಣೆಹೊಳೆ, ನಂದಿ, ಕಲ್ಲತ್ತಿಗೆರೆ-ಮೊದಲಾದ ಊರುಗಳಲ್ಲಿ ಕೆಲಸಮಯ ಕಾಯಕ ಮಾಡಿಕೊಂಡಿದ್ದು ಕೊನೆಗೆ ಚಿತ್ರದುರ್ಗ ಜಿಲ್ಲೆಯ ಹೊಳಲಕೆರೆಯ ಒಂದು ಮಠದಲ್ಲಿ ಲಿಂಗೈಕ್ಯನಾದನೆಂದು ಹೇಳಲಾಗಿದೆ.
(ಎಲ್.ವಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ